ಜನನ ಕರ್ಮಗಳು -
ಇವುಗಳಲ್ಲಿ ಶಿಶುಜನನಕ್ಕೆ ಪೂರ್ವದ ಕೆಲವು ಕರ್ಮಗಳೂ ಜನನಾನಂತರದ ಕೆಲವು ಕರ್ಮಗಳೂ ಸೇರುತ್ತವೆ. ಇವುಗಳ ವಿಚಾರ ಮೊದಲಿಗೆ ಗೃಹ್ಯ ಸೂತ್ರಗಳಲ್ಲೂ ಅನಂತರ ಕಾಲಾನುಸಾರಿ ಮಾರ್ಪಾಟುಗಳೊಡನೆ ಧರ್ಮಶಾಸ್ತ್ರ ಸಾಹಿತ್ಯದಲ್ಲೂ ಬರುತ್ತದೆ.

ಚತುರ್ಥೀ ಕರ್ಮ ಅಥವಾ ಚತುರ್ಥೀ ಹೋಮ : ವೇದಯಗದಲ್ಲಿ, ವಿವಾಹವಾದ ನಾಲ್ಕನೆಯ ದಿನ ಈ ಕ್ರಿಯೆಯನ್ನು ನಡೆಸಲಾಗುತ್ತಿತ್ತು. ಅಗ್ನಿ ಇತ್ಯಾದಿ ದೇವತೆಗಳಿಗೆ ಚರು ಹೋಮ ಮಾಡಿ ಅಧ್ಯಂಡಾ ಗಿಡದ ಬೇರನ್ನು ತೇದು ಅದರ ಗಂಧದ ಕೆಲವು ತೊಟ್ಟುಗಳನ್ನು ಹೆಂಡತಿಯ ಮೂಗಿನ ಹೊಳ್ಳೆಯೊಳಗೆ ಮಂತ್ರ ಪೂರ್ವಕವಾಗಿ ಹಾಕಬೇಕು. ಅಂದೇ ನಡೆಸುವ ಸಂಭೋಗಕ್ರಿಯೆಯ ಕಾಲದಲ್ಲಿ ಜಪಿಸಬೇಕಾದ ಮಂತ್ರಗಳೂ ಇವೆ. ಹೀಗೆ ಇದು ವಿವಾಹದ ಭಾಗವೇ ಆದ ಕರ್ಮ. ಮದುವೆ ಎಳೆಯ ವಯಸ್ಸಿನಲ್ಲಾಗಿ ನಾಲ್ಕಾರು ವರ್ಷಗಳ ಅನಂತರ ಪ್ರಸ್ಥವಾಗುವ ಪ್ರಸಂಗಗಳಲ್ಲಿ ಈ ಕರ್ಮವನ್ನು ಗರ್ಭಾಧಾನವೆನ್ನುತ್ತಾರೆ. ಹೆಂಡತಿ ಮೈನೆರೆದ ನಾಲ್ಕನೆಯ ರಾತ್ರಿಯಿಂದ 16ನೆಯ ರಾತ್ರಿವರೆಗೆ ಎಂದಾದರೂ ಈ ಕರ್ಮ ನಡೆಸಬಹುದು. ಸಮರಾತ್ರಿಗಳೂ ಅದರಲ್ಲೂ ಕೊನೆಕೊನೆಯವು ಗಂಡು ಸಂತಾನಕ್ಕೆ ಹೆಚ್ಚು ಯೋಗ್ಯವಾದುವು. ಅಧ್ಯಂಡಾ ಬೇರಿನ ಕರ್ಮವನ್ನು ಬಿಟ್ಟರೆ ಇದು ಚತುರ್ಥೀ ಕರ್ಮವೇ.

ಪುಂಸವನ : 3ನೆಯ ತಿಂಗಳು ಅಥವಾ ಕೆಲವರ ಮತದಂತೆ 5, 7 ಅಥವಾ 8ನೆಯ ತಿಂಗಳು ನಡೆಸಬೇಕಾದ್ದು. ಸೀಮಂತವಾದ ಅನಂತರ ಹಾಗೂ ಗರ್ಭ ಸ್ಪಷ್ಟವಾದ ಮೇಲೆ ನಡೆಸುವುದೆಂದೂ ಹೇಳಲಾಗುತ್ತದೆ. ಋತುಮತಿಯಾಗದ ಹುಡುಗಿ ಆಲದ ಬಿಳಲು ಮತ್ತು ಅದರ ಎರಡು ಹಣ್ಣುಗಳನ್ನು ನೀರಿನೊಡನೆ ಎರಡು ಗುಂಡುಕಲ್ಲುಗಳನ್ನು ಉಪಯೋಗಿಸಿ ಕುಟ್ಟಬೇಕು. ಆ ರಸದ ಕೆಲವು ಹನಿಗಳನ್ನು ಗಂಡ ತನ್ನ ಹೆಂಡತಿಯ ಮೂಗಿನ ಬಲ ಹೊಳ್ಳೆಯಲ್ಲಿ ಹೆಬ್ಬೆಟ್ಟಿನ ಮೂಲಕ ಹಾಕಬೇಕು. ಒಂದು ಬೊಗಸೆ ಮೊಸರಿಗೆ ಎರಡು ಸಾಸಿವೆ ಮತ್ತು ಒಂದು ಅಕ್ಕಿ ಕಾಳನ್ನು ಹಾಕಿ ಕುಡಿಯಲು ಕೊಡುವುದು. ಹೀಗೆ ಮೂರು ಸಲ ಮಾಡಬೇಕು.

ಅನವಲೋಭನ ಅಥವಾ ಗರ್ಭರಕ್ಷಣ : ಇದು ವೈದಿಕ ಯುಗದಲ್ಲಿ ಪುಂಸವನದ ಭಾಗವಾಗಿತ್ತು. ಅನಂತರ ಕಾಲದಲ್ಲಿ ಪುಂಸವನದ ಜೊತೆಯಲ್ಲಿ ಇಲ್ಲವೆ ಎರಡನೆಯ ಬಿಟ್ಟರೆ ಮೂರನೆಯ ತಿಂಗಳು ನಡೆಸಲಾಗುತ್ತಿತ್ತು. ಈ ಕ್ರಿಯೆ ನಡೆಸುವುದರಿಂದ ಗರ್ಭಪತನವಾಗಲೀ ಗರ್ಭನಾಶವಾಗಲೀ ಆಗುವುದಿಲ್ಲವಾದುದರಿಂದ ಈ ಹೆಸರು. ದೂರ್ವಾರಸ ಹನಿಗಳನ್ನು ಹೆಂಡತಿಯ ಮೂಗಿನೊಳಗೆ ಬಿಡುವುದೂ ರಕ್ಷಣೆಗಾಗಿ ಪ್ರಾರ್ಥನಾ ಪೂರ್ವಕ ಆಕೆಯ ಹೃದಯವನ್ನು ಮುಟ್ಟುವುದೂ ಇದರ ಮುಖ್ಯ ಅಂಶಗಳು.
ಸೀಮಂತೋನ್ನಯನ, ಸೀಮಂತಕರಣ ಅಥವಾ ಸೀಮಂತ: ನಾಲ್ಕನೆಯ ತಿಂಗಳಲ್ಲಿ ಇಲ್ಲವೆ ಪುಂಸವನದ ಅನಂತರ ನಡೆಯುವ ಕ್ರಿಯೆ. ಹೋಮಾಗ್ನಿಯ ಪಶ್ಚಿಮದಲ್ಲಿ ಹೆಂಡತಿ ಕುಳಿತುಕೊಳ್ಳಬೇಕು. ಯಜಮಾನ ಕೆಲವು ಹೋಮಗಳನ್ನು ಮಾಡಿ, ಸಮಸಂಖ್ಯೆಯಲ್ಲಿ ದೋರಹಣ್ಣುಗಳು, ಮುಳ್ಳುಹಂದಿಯ ಗರಿ (ಇದಕ್ಕೆ ಮೂರು ಬಿಳಿಚುಕ್ಕೆ ಅಥವಾ ಉಂಗುರಗಳು ಇರಬೇಕು), ಮತ್ತು ಮೂರು ಕಟ್ಟು ದರ್ಭೆ - ಇವುಗಳಿಂದ ಮೂರು ಸಲ ಆಕೆಯ ತಲೆಗೂದಲನ್ನು ಮುಂದುಗಡೆ ಕೆಳಗಿನಿಂದ ಮೇಲಕ್ಕೆ ಬಾಚುತ್ತಾನೆ. ಅನಂತರ ವೈಣಿಕರು ವೀಣೆಯೊಡನೆ ಹಾಡುತ್ತಾರೆ. ಇದು ಮುಖ್ಯವಾಗಿ ಸಾಮಾಜಿಕವಾಗಿ ಹಬ್ಬದಂತೆ ಆಚರಿಸುವ ದಿನ. ಗರ್ಭಿಣಿಯ ಮನಸ್ಸನ್ನು ಸಂತೋಷವಾಗಿಡುವುದೇ ಇದರ ಉದ್ದೇಶವೆನ್ನಬಹುದು. ಇದು ಈಚೆಗೆ ಸಂಸ್ಕಾರಗಳ ಪಟ್ಟಿಯಲ್ಲಿ ಸೇರಿದೆ. ಮನು ಇದರ ಹೆಸರು ಕೂಡ ಎತ್ತುವುದಿಲ್ಲ.

ವಿಷ್ಣುಬಲಿ : ಗರ್ಭಕ್ಕೆ ಉಂಟಾಗಬಹುದಾದ ತೊಂದರೆಯನ್ನು ನಿವಾರಿಸಿ ಸುಖ ಪ್ರಸವವಾಗುವುದಕ್ಕೆ 8ನೆಯ ತಿಂಗಳಲ್ಲಿ ನಡೆಸುವ ಕರ್ಮ.

ಸೋಷ್ಯಂತೀ ಕರ್ಮ : ಇದು ಬಹಳ ಪ್ರಾಚೀನವಾದುದು. ಪ್ರಸವಕಾಲದಲ್ಲಿ ನಡೆಸುವಂಥದು. ತಾಯಿಯ ಕಾಲ ಬಳಿ ತುರ್ಯಂತೀ ಸಸ್ಯವನ್ನು ಇಡಲಾಗುವುದು. ಎರಡೂ ಕೈಗಳಿಂದ ಆಕೆಯ ತಲೆಯನ್ನು ಮುಟ್ಟುವುದು ಮತ್ತು ಮಂತ್ರ ಪೂರ್ವಕವಾಗಿ ನದಿ ಅಥವಾ ಬುಗ್ಗೆಯ ನೀರನ್ನು ಪ್ರೋಕ್ಷಿಸುವುದು. ಜರಾಯು ಹೊರಬರದಿದ್ದರೆ, ಇನ್ನೆರಡು ಮಂತ್ರಗಳಿಂದ ನೀರನ್ನು ಪ್ರೋಕ್ಷಿಸುವುದು.

ಜಾತಕರ್ಮ : ಇದೂ ಅತ್ಯಂತ ಪ್ರಾಚೀನವಾದುದು. ಮಗು ಹುಟ್ಟಿದರೆ, ವೈಶ್ವಾನರೇಷ್ಟಿ ಮಾಡುತ್ತಿದ್ದರೆಂದು ಯಜುರ್ವೇದ ಸಂಹಿತೆಯಿಂದ ತಿಳಿದು ಬರುತ್ತದೆ. ಮಗುವೊಂದು ಜನಿಸಿದಾಗ, ದಧಿ ಮತ್ತು ಘೃತ ಹೋಮವನ್ನು ನಡೆಸಿ, ಶಿಶುವಿನ ಬಲ ಕಿವಿಯಲ್ಲಿ ವಾಕ್ ಎಂಬ ಪದವನ್ನು ಮೂರು ಬಾರಿ ಪಠಿಸುವುದು. ಅನಂತರ ಚಿನ್ನದ ಸೌಟು, ಬಳೆ ಅಥವಾ ಉಂಗುರದಿಂದ ಮೊಸರು, ತುಪ್ಪ, ಜೇನುಗಳ ಮಿಶ್ರಣಮಾಡಿ ಶಿಶುವಿಗೆ ನೆಕ್ಕಿಸುವುದು. ಮಗುವಿಗೆ ಎರಡು ಹೆಸರಿಡುವುದು-ಒಂದು ವ್ಯಾವಹಾರಿಕ ಹೆಸರು ಇನ್ನೊಂದು ರಹಸ್ಯ ಹೆಸರು. ಇದಾದ ಮೇಲೆ ಸ್ತನ್ಯದಾನ-ಮಗುವಿಗೆ ಹಾಲುಣಿಸುವುದು. ಆಗ ಮಾತ್ರ ಅಭಿಮಂತ್ರಣ; ತಾಯಿಯನ್ನು ಮಂತ್ರಗಳಿಂದ ಅಭಿಮಂತ್ರಿಸುವುದು. ಪಂಚಬ್ರಾಹ್ಮಣ ಸ್ಥಾಪನ. ಮಗುವಿನ ಸುತ್ತ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಜನ ಬ್ರಾಹ್ಮಣರೂ ಮತ್ತು ಮೇಲುಗಡೆಯಿಂದ ಯಜಮಾನನೂ ಶಿಶುವಿನ ಮೇಲೆ ಉಸಿರು ಬಿಡಬೇಕು. ಇದು ಚಾತಕರ್ಮ. ಇದನ್ನು ಜನನವಾದ ಕೂಡಲೆ ಮಾಡಬೇಕೆಂದು ಕೆಲವರು ಹೇಳಿದರೆ, ಮತ್ತೆ ಕೆಲವರು ತಾಯಿ, ದಾದಿ ಹೊರತು ಇತರರು ಮಗುವನ್ನು ಮುಟ್ಟುವ ಮೊದಲು ಮಾಡಬೇಕೆಂದೂ ನಾಭಿ ಛೇದನಕ್ಕೆ ಮೊದಲು ಮಾಡಬೇಕೆಂದೂ ಹೇಳುತ್ತಾರೆ.
ಈಚೆಗೆ ಜಾತಕರ್ಮ ಈ ಅಂಶಗಳಿಂದ ಕೂಡಿದೆ: ಮೇಧಾಜನನ-ತುಪ್ಪ ಮತ್ತು ಜೇನು ನೆಕ್ಕಿಸುವುದು, ಇದೇ ಮುಖ್ಯವಾದ ಕರ್ಮ. ಆಯುಷ್ಯ-ಶಿಶುವಿನ ಹೊಕ್ಕಳ ಬಳಿ ಅಥವಾ ಬಲಕಿವಿಯಲ್ಲಿ ಕೆಲವು ಮಂತ್ರಗಳನ್ನು ಪಠಿಸುವುದು. ಅಂಸಾಭಿಮರ್ಷಣ-ಮಂತ್ರಪೂರ್ವಕ ಶಿಶುವಿನ ತೋಳು ಮುಟ್ಟುವುದು. ಮಾತ್ರಭಿಮಂತ್ರಣ-ಪಂಚ ಬ್ರಾಹ್ಮಣ ಸ್ಥಾಪನ, ಸ್ತನ್ಯವಾನ ಮತ್ತು ದೇಶಾಭಿಮಂತ್ರಣ ಅಥವಾ ದೇಶಾಭಿಮರ್ಷನ-ಜನನ ಸ್ಥಳವನ್ನು ಮಂತ್ರಪೂರ್ವಕ ಮುಟ್ಟುವುದು) ಇವುಗಳ ಜೊತೆಗೆ ರಾಕ್ಷಸ ಬಾಧೆಯನ್ನು ದೂರ ಮಾಡಲು ಸಾಸಿವೆ ಹಾಗೂ ಬತ್ತದ ಹೊಟ್ಟಿನ ಹೋಮವನ್ನೂ ಜಾತಕರ್ಮದಲ್ಲಿ ವಿಧಿಸಲಾಗಿದೆ. ಶಿಶುವಿಗೆ ಸ್ನಾನ ಮಾಡಿಸಬೇಕೆಂದು ಕೆಲವು ಆಚಾರ್ಯರು ಅಭಿಪ್ರಾಯಪಟ್ಟಿದ್ದಾರೆ. 
ಐದು, ಆರನೆಯ ದಿನಗಳಲ್ಲಿ ನಡೆಸುವ ಶಾಂತಿಕ್ರಿಯೆಗಳು ಪುರಾಣಯುಗದಲ್ಲಿ ಪ್ರಾರಂಭವಾದುವು. ಸಂಜೆ, ತಂದೆ ಅಥವಾ ಯಾರಾದರೂ ಗಂಡಸರು ಸ್ನಾನ ಮಾಡಿ ಗಣಪತಿ, ಜನ್ಮದಾ, ಷಷ್ಠೀದೇವೀ ಮತ್ತು ಭಗವತೀ (ದುರ್ಗಾ)-ಈ ದೇವತೆಗಳನ್ನು ಪೂಜಿಸಬೇಕು. ಬಂದ ಅತಿಥಿಗಳನ್ನು ಸತ್ಕರಿಸಿ ಆ ರಾತ್ರಿ ಎಲ್ಲರೂ ಜಾಗರಣೆ ಮಾಡಬೇಕು. ನಾನಾ ವಿಧವಾದ ಆಯುಧಗಳನ್ನು ಸಜ್ಜಾಗಿ ಇಟ್ಟು ಕೊಂಡಿರಬೇಕು.

ಉತ್ಥಾನ : 10 ಅಥವಾ 12ನೆಯ ದಿನ ತಂದೆ ಕ್ಷೌರ ಮಾಡಿಸಿಕೊಂಡು ಸ್ನಾನ ಮಾಡುತ್ತಾನೆ, ಹಾಗು ಮನೆಯನ್ನು ಶುದ್ಧಿಗೊಳಿಸುತ್ತಾನೆ. ನಾಭಿ ಛೇದನದವರೆಗೆ ಯಾವ ಅಶುದ್ಧಿಯೂ ಇರದು. ಅನಂತರ 12 ದಿನಗಳವರೆಗೆ ಜ್ಞಾತಿಗಳಿಗೆಲ್ಲ ಜಾತಾ ಶೌಚವಿರುತ್ತದೆ. ಅನಂತರ ಎಲ್ಲರಿಗೂ ಆಶೌಚ ನಿವೃತ್ತಿಯಾದರೂ ತಾಯಿಗೆ ಮಾತ್ರ ಗಂಡುಮಗುವಾದರೆ 30 ದಿನಗಳವರೆಗೂ ಹೆಣ್ಣಾದರೆ 40 ದಿನಗಳವರೆಗೂ ಮೈಲಿಗೆ ಇರುತ್ತದೆ.

ನಾಮಕರಣ : ಇದನ್ನು ಸೋಷ್ಯಂತೀಕರ್ಮದೊಂದಿಗೆ ಅಥವಾ ಚಾತಕರ್ಮದೊಂದಿಗೆ ನಡೆಸುವ ವಾಡಿಕೆಯಿತ್ತೆಂದು ಹಿಂದೆ ಹೇಳಿದೆ. ಈಚೆಗೆ, 10, 11 ಅಥವಾ 12ನೆಯ ದಿನ ಅಥವಾ 10ನೆಯ ದಿನ ಕಳೆದ ಮೇಲೆ ಎಂದಾದರೂ ನಡೆಸಬಹುದೆಂಬ ಸಂಪ್ರದಾಯ ಬೆಳೆಯಿತು. ಪ್ರಕೃತ ಆಚರಣೆ ಪ್ರಕಾರ 12 ಅಥವಾ 16ನೆಯ ದಿನ ಈ ಕರ್ಮವನ್ನು ನೆರವೇರಿಸಲಾಗುವುದು.

ಇದಿಷ್ಟು ಶಾಸ್ತ್ರದಲ್ಲಿ ಉಕ್ತವಾಗಿರುವುದು. ಪ್ರಕೃತ ಆಚರಣೆಯಲ್ಲಿ ಈ ಕರ್ಮಗಳು ಇನ್ನೂ ಹ್ರಸ್ವವಾಗಿವೆ. ಮತ್ತು ಹೆಚ್ಚು ಹೆಚ್ಚು ಸಾಮಾಜಿಕವಾದ ಸಂತೋಷ ಸಮಾರಂಭಗಳಾಗಿವೆ. ಗರ್ಭಾಧಾನದ ಅನಂತರ ಗರ್ಭದ ಮೂರನೆಯ ತಿಂಗಳು ಹೂ ಮುಡಿಸುವುದನ್ನು 5ನೆಯ ತಿಂಗಳು ಬಳೆ ತೊಡಿಸುವುದನ್ನು ಈಗ ವ್ಯವಹಾರದಲ್ಲಿಟ್ಟು ಕೊಂಡಿದ್ದಾರೆ. ಇವುಗಳ ಉದ್ದೇಶ ಗರ್ಭಿಣಿಯ ಮನಸ್ಸನ್ನು ರಂಜಿಸುವುದೇ ಆಗಿದೆ. 8ನೆಯ ತಿಂಗಳು ಸೀಮಂತ. ಪ್ರಸವಾನಂತರ 11ನೆಯ ದಿನ ಒಳಕ್ಕೆ ಬರುತ್ತಾರೆ-ಮಗು, ತಾಯಿ, 16ನೆಯ ದಿನ ನಾಮಕರಣ ಹಾಗೂ ತೊಟ್ಟಿಲು ತೂಗುವುದು. ಅಲ್ಲಿಯ ವರೆಗೆ ಮಗುವನ್ನು ತೊಟ್ಟಿಲಿಗೆ ಹಾಕುವುದಿಲ್ಲ. ಅಂದು ಸಂಜೆ ಗಣಪತಿ ಪೂಜೆ ಮಾಡಿ, ಗುಂಡುಕಲ್ಲಿನಂತೆ ಮಗು ದೀರ್ಘಾಯುಷ್ಯ ಹೊಂದಲೆಂದು ಗುಂಡುಕಲ್ಲನ್ನು ಅಲಂಕರಿಸಿ ಆ ಗುಂಡಪ್ಪನನ್ನು ತೊಟ್ಟಿಲಿಗೆ ಮೊದಲು ಹಾಕಿ ಅನಂತರ ಮಗುವನ್ನು ತೊಟ್ಟಿಲಲ್ಲಿ ಮಲಗಿಸುತ್ತಾರೆ ಮತ್ತು ಮಗುವಿಗೆ ಹೆಸರಿಡುತ್ತಾರೆ. ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಮುನ್ನ ಬಜೆಯನ್ನು ತೇಯ್ದು ಅದರ ಗಂಧವನ್ನು ಬೆಣ್ಣೆಯೊಡನೆ ಮಗುವಿಗೆ ನೆಕ್ಕಿಸುತ್ತಾರೆ. ಬಜೆ ಬೆಣ್ಣೆ ಇಡುವೆನು ಬಾರೋ ಎಂಬ ಜನಪದ ಗೀತೆಯೂ ಈ ಸಂದರ್ಭದಲ್ಲಿ ಹುಟ್ಟಿದೆ. ಜಾತಕರ್ಮ ಹಾಗು ನಾಮಕರಣಕ್ಕೆ ಸಂಬಂಧಪಟ್ಟ ಕರ್ಮಗಳನ್ನು ಉಪನಯನ ಅಥವಾ ವಿವಾಹಕ್ಕೆ ಪೂರ್ವಾಂಗವಾಗಿ ಆಚರಿಸುತ್ತಾರೆ.								(ಆರ್.ಎಸ್.ಎಸ್.; ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ